ಧಾತು
 	ರಸಾಯನವಿಜ್ಞಾನದಲ್ಲಿ ಅದೇ ಪರಮಾಣ್ವಕ ಸಂಖ್ಯೆ ಇರುವ ಪರಮಾಣುಗಳಿಂದ ರಚಿತವಾದ ಒಂದು ವಸ್ತು (ಎಲಿಮೆಂಟ್). ಮೂಲವಸ್ತು ಪರ್ಯಾಯ ನಾಮ. ಆಕ್ಸಿಜನ್, ಹೈಡ್ರೊಜನ್, ಕಬ್ಬಿಣ (ಐರನ್), ತಾಮ್ರ (ಕಾಪರ್), ಚಿನ್ನ (ಗೋಲ್ಡ್), ಬೆಳ್ಳಿ (ಸಿಲ್ವರ್), ನೈಟ್ರೊಜನ್, ಕ್ಲೋರಿನ್ ಮತ್ತು ಯುರೇನಿಯಮ್ ಕೆಲವು ಸುಲಭ ಉದಾಹರಣೆಗಳು. ಧಾತುಗಳ ಪೈಕಿ 75% ಲೋಹಗಳೇ, ಉಳಿದವು ಅಲೋಹಗಳು. ಕೊಠಡಿ ಉಷ್ಣತೆಯಲ್ಲಿ ಹೆಚ್ಚಿನ ಧಾತುಗಳು ಘನ ಸ್ಥಿತಿಯಲ್ಲಿಯೂ ಪಾದರಸ (ಮಕ್ರ್ಯುರಿ) ಮತ್ತು ಬ್ರೋಮಿನ್ ದ್ರವ ಸ್ಥಿತಿಯಲ್ಲಿಯೂ ಇವೆ.

	ಭೌತಜಗತ್ತು ವಸ್ತುಮಯವಷ್ಟೆ. ಈ ವಸ್ತು ರಚನೆಯಲ್ಲಿ ಸುಮಾರು 100 ಮೂಲವಸ್ತುಗಳು ಶುದ್ಧ ಸ್ಥಿತಿಯಲ್ಲಿ ಅಥವಾ ಸಂಯುಕ್ತ ರೂಪದಲ್ಲಿ ಪಾಲ್ಗೊಳ್ಳುವುವು ಎಂದು ವಿಜ್ಞಾನಿಗಳ ಅಭಿಪ್ರಾಯ. ಇವೇ ಧಾತುಗಳು-ಪ್ರಕೃತಿಯಲ್ಲಿ ವಸ್ತುರಚನೆಗೆ ಆಧಾರವಾದ ಇಟ್ಟಿಗೆಗಳು. ಇವುಗಳ ಪೈಕಿ ವಸ್ತು ರಚನೆಯಲ್ಲಿ ವಿಶೇಷ ಪಾತ್ರ ವಹಿಸುವ ಧಾತುಗಳು ಸುಮಾರು 30. ಇಂದು ನಮಗೆ ಖಚಿತವಾಗಿ ತಿಳಿದಿರುವ ಧಾತುಗಳ ಸಂಖ್ಯೆ 105. ಧಾತುಗಳ ಸಂಖ್ಯೆ 118ಕ್ಕೆ ಸೀಮಿತ ಎಂಬುದು ತಾತ್ತ್ವಿಕ ಲೆಕ್ಕಾಚಾರ.

	ಸಾಮಾನ್ಯ ಉಷ್ಣತೆಯಲ್ಲಿ (ಅಂದರೆ ಕೊಠಡಿ ಉಷ್ಣತೆಯಲ್ಲಿ) ಘನ, ದ್ರವ ಮತ್ತು ಅನಿಲಸ್ಥಿತಿಗಳಲ್ಲಿರುವ ಧಾತುಗಳಿವೆ. ನಮಗೆ ಪರಿಚಿತವಾದ ಹೈಡ್ರೊಜನ್, ಆಕ್ಸಿಜನ್, ನೈಟ್ರೊಜನ್, ಕ್ಲೋರಿನ್ ಮತ್ತು ಫ್ಲೂರಿನ್ ಹಾಗೂ ವಿರಳ ಅನಿಲಗಳಾದ ಹೀಲಿಯಮ್, ನಿಯಾನ್, ಆರ್ಗಾನ್, ಕ್ರಿಪ್ಟಾನ್, ಕ್ಸೆನಾನ್ ಮತ್ತು ರೇಡಾನ್ ಒಟ್ಟು 11 ಧಾತುಗಳು ಸಾಮಾನ್ಯ ಉಷ್ಣತೆಯಲ್ಲಿ ಅನಿಲಗಳು. ಪಾದರಸ ಮತ್ತು ಬ್ರೋಮಿನ್ ಮಾತ್ರ ದ್ರವಗಳು. ಮಿಕ್ಕವು ಘನಗಳು. ಘನ ಧಾತುಗಳಲ್ಲಿ ಬಹುಪಾಲು ಲೋಹಗಳು. ಇವುಗಳಿಗೆ ವಿಶಿಷ್ಟ ಹೊಳಪುಂಟು. ಇವು ಉತ್ತಮ ಉಷ್ಣ ಹಾಗೂ ವಿದ್ಯುದ್ವಾಹಕಗಳು. ಲೋಹಗಳನ್ನು ನವುರಾದ ವರಕುಗಳಾಗಿ ತಟ್ಟಬಹುದು. ಈ ಗುಣಕ್ಕೆ ಕುಟ್ಯತೆ ಎಂದು ಹೆಸರು. ತಂತಿಯಾಗಿ ಎಳೆಯಬಹುದು. ಈ ಗುಣಕ್ಕೆ ತನ್ಯತೆ ಎಂದು ಹೆಸರು. ರಂಜಕ, ಅಯೊಡೀನ್, ಬೋರನ್, ಸಿಲಿಕನ್ ಮತ್ತು ಕಾರ್ಬನ್ನುಗಳಿಗೆ ಈ ಲಕ್ಷಣಗಳಿಲ್ಲ. ಆದ್ದರಿಂದ ಇವು ಅಲೋಹಗಳು ಎನಿಸಿಕೊಂಡಿವೆ. ಇವುಗಳಲ್ಲಿ ಕಾರ್ಬನ್ನಿನ ಭಿನ್ನ ರೂಪವಾದ ಗ್ರಾಫೈಟಿಗೆ ಮಾತ್ರ ಉಷ್ಣ ಮತ್ತು ವಿದ್ಯುದ್ವಹನ ಸಾಮಥ್ರ್ಯ ಇರುವುದು ವಿಶೇಷ ಸಂಗತಿ. ಎಲ್ಲ ಅನಿಲ ಧಾತುಗಳು ಮತ್ತು ಬ್ರೋಮಿನ್ ಅಲೋಹಗಳು. ದ್ರವರೂಪಿಯಾದ ಪಾದರಸಕ್ಕೆ ಲೋಹದ ಲಕ್ಷಣಗಳಿವೆ. ಲೋಹಗಳ ಮತ್ತು ಅನಿಲಗಳ ಗುಣಗಳೆರಡನ್ನೂ ಮೈಗೂಡಿಸಿಕೊಂಡಿರುವ ಧಾತುಗಳುಂಟು. ಆರ್ಸೆನಿಕ್, ಆಂಟಿಮೊನಿ, ಸೆಲೆನಿಯಮ್ ಮತ್ತು ಟೆಲ್ಯೂರಿಯಮ್ ಇವಕ್ಕೆ ನಿದರ್ಶನ. ಇವನ್ನು ಲೋಹಾಭಗಳು (ಮೆಟಲಾಯ್ಡ್ಸ್) ಎಂದು ಕರೆಯುತ್ತಾರೆ.

	ಒಂದಕ್ಕಿಂತ ಹೆಚ್ಚು ಧಾತುಗಳು ನಿಯತ ತೂಕ ಪ್ರಮಾಣದಲ್ಲಿ ಸಂಯೋಗಗೊಂಡು ಸಂಯುಕ್ತಗಳಾಗಿವೆ. ಸಂಯೋಜನೆಯ ಫಲವಾಗಿ ಅಂಗಧಾತುಗಳು ತಮ್ಮ ವಿಶಿಷ್ಟ ಲಕ್ಷಣಗಳನ್ನು ಕಳೆದುಕೊಳ್ಳುವುವು. ಉಂಟಾದ ಸಂಯುಕ್ತಕ್ಕೆ ತನ್ನದೇ ಆದ ಗುಣಗಳಿರುವುವು. ಉದಾಹರಣೆಗೆ ಹೈಡ್ರೊಜನ್ ಮತ್ತು ಆಕ್ಸಿಜನ್ನುಗಳು 1:8 ತೂಕ ಪ್ರಮಾಣದಲ್ಲಿ ಸೇರಿ ನೀರು ಉಂಟಾಗಿದೆ. ಉಪ್ಪಿನಲ್ಲಿ ಸೋಡಿಯಮ್ ಮತ್ತು ಕ್ಲೋರಿನ್ ಧಾತುಗಳು 23:35.5 ತೂಕ ಪ್ರಮಾಣದಲ್ಲಿವೆ. ಹೀಗೆಯೇ ಕಾರ್ಬನ್, ಹೈಡ್ರೊಜನ್ ಮತ್ತು ಆಕ್ಸಿಜನ್ನುಗಳು 72 : 11 : 88 ತೂಕ ಪ್ರಮಾಣದಲ್ಲಿ ಕೂಡಿ ಸಕ್ಕರೆ ಆಗಿದೆ. ಮರಳಿನಲ್ಲಿರುವುದು ಸಿಲಿಕನ್ ಮತ್ತು ಆಕ್ಸಿಜನ್ನುಗಳು.

	ಧಾತುಗಳು ಪರಮಾಣುಗಳೆಂಬ ಅವಿಭಾಜ್ಯವಾದ ಅತ್ಯಂತ ಚಿಕ್ಕಕಣಗಳಿಂದ ಆಗಿವೆ. ಪರಮಾಣುಗಳು ಅವಿನಾಶ್ಯ. ಅಂದರೆ ರಾಸಾಯನಿಕ ಕ್ರಿಯೆಗಳಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ. ಒಂದೆ ಧಾತುವಿನ ಎಲ್ಲ ಪರಮಾಣುಗಳೂ ಆಕಾರ ಗಾತ್ರ ಮತ್ತು ಗುಣಗಳಲ್ಲಿ ಒಂದೆ ತೆರನಾಗಿರುವುವು; ಮತ್ತು ಬೇರೆ ಬೇರೆ ಧಾತುಗಳ ಪರಮಾಣುಗಳಿಗಿಂತ ಭಿನ್ನವಾಗಿರುತ್ತವೆ. ಒಂದು ಪರಮಾಣುವಿಗಿಂತ ಕಡಿಮೆಯಾಗಿ ಯಾವ ಧಾತುವೂ ರಾಸಾಯನಿಕ ಸಂಯೋಜನೆಯಲ್ಲಿ ಪಾತ್ರವಹಿಸುವುದು ಸಾಧ್ಯವಿಲ್ಲ. ಧಾತುವಿನ ಪರಮಾಣುಬೀಜದಲ್ಲಿರುವ ಪ್ರೋಟಾನುಗಳ ಸಂಖ್ಯೆಗೆ ಪರಮಾಣು ಸಂಖ್ಯೆ ಎಂದೂ ಬೀಜದಲ್ಲಿರುವ ಪ್ರೋಟಾನ್ ಮತ್ತು ನ್ಯೂಟ್ರಾನುಗಳ ಒಟ್ಟು ಸಂಖ್ಯೆಗೆ ಅದರ ರಾಶಿಸಂಖ್ಯೆ ಎಂದೂ ಹೆಸರು. ಧಾತುವಿನ ರಾಸಾಯನಿಕ ಗುಣಗಳನ್ನು ಪರಮಾಣುಸಂಖ್ಯೆಯೂ ಅದರ ತೂಕವನ್ನು ರಾಶಿಸಂಖ್ಯೆಯೂ ನಿರ್ಧರಿಸುವುವು. ಆದ್ದರಿಂದ ಒಂದೆ ಧಾತುವಿನ ಎಲ್ಲ ಪರಮಾಣುಗಳ ಬೀಜಗಳಲ್ಲೂ ಪ್ರೋಟಾನುಗಳ ಸಂಖ್ಯೆ ಸಮವಾಗಿರುವುದು. ಆದರೆ ಬೀಜಗಳಲ್ಲಿರುವ ನ್ಯೂಟ್ರಾನುಗಳ ಸಂಖ್ಯೆ ಹೆಚ್ಚು ಕಡಿಮೆಯಾಗಿದ್ದರೆ ಬಾಧಕವಿಲ್ಲ. ಏಕೆಂದರೆ ಅದರಿಂದ ಧಾತುವಿನ ಆಂಥ ಪರಮಾಣುಗಳ ತೂಕ ಮಾತ್ರ ವ್ಯತ್ಯಾಸವಾಗುವುದು. ರಾಸಾಯನಿಕ ಗುಣಗಳು ಏಕರೀತಿಯಾಗಿರುವುವು. ಇಂಥ ಪರಮಾಣುಗಳಿಗೆ ಆಯಾ ಧಾತುಗಳ ಐಸೊಟೋಪುಗಳು ಎಂದು ಹೆಸರು. ಉದಾಹರಣೆಗೆ ಆಕ್ಸಿಜನ್ ಪರಮಾಣುಬೀಜಗಳಲ್ಲಿರುವುದು 8 ಪ್ರೋಟಾನುಗಳು ಮಾತ್ರ. ಈ ಸಂಖ್ಯೆ ಸ್ಥಿರ. ಆದರೆ ತಮ್ಮ ಬೀಜಗಳಲ್ಲಿ ಅನುಕ್ರಮವಾಗಿ 8, 9, 10 ನ್ಯೂಟ್ರಾನುಗಳಿರುವ ಆಕ್ಸಿಜನ್ ಪರಮಾಣುಗಳೂ ವಾಯುಮಂಡಲದಲ್ಲಿವೆ. ಅಂದರೆ ಈ ಆಕ್ಸಿಜನ್ ಐಸೊಟೋಪುಗಳ ರಾಶಿ ಸಂಖ್ಯೆಗಳು ಅನುಕ್ರಮವಾಗಿ 16, 17 ಮತ್ತು 18. ಒಂದು ಧಾತುವಿನ ಐಸೊಟೋಪಿಕ್ ತೂಕಗಳ ಸರಾಸರಿ ಬೆಲೆಯನ್ನೆ ಅದರ ಪರಮಾಣು ತೂಕ ಎನ್ನುವುದು.

	ಮೊದಲ 20 ಧಾತುಗಳ ಪರಮಾಣುಗಳಲ್ಲಿರುವ ಪ್ರೋಟಾನುಗಳ ಸಂಖ್ಯೆ ನ್ಯೂಟ್ರಾನುಗಳ ಸಂಖ್ಯೆಗೆ ಸರಿಸುಮಾರಾಗಿ ಸಮ. ಅಲ್ಲಿಂದ ಮುಂದೆ ಬರುವ ಧಾತುಗಳ ಪರಮಾಣುಗಳಲ್ಲಿ ಪ್ರೋಟಾನುಗಳ ಸಂಖ್ಯೆಗಿಂತ ನ್ಯೂಟ್ರಾನುಗಳ ಸಂಖ್ಯೆ ಹೆಚ್ಚುತ್ತ ಹೋಗುವುದು. ಉದಾಹರಣೆಗೆ 100ನೆಯ ಧಾತುವಿನಲ್ಲಿ (ಫರ್ಮಿಯಮ್) 100 ಪ್ರೋಟಾನುಗಳೂ ಸುಮಾರು 150 ನ್ಯೂಟ್ರಾನುಗಳೂ ಇವೆ.

	ಧಾತುಗಳ ಪರಮಾಣುಸಂಖ್ಯೆಗೂ ಅವುಗಳ ಪ್ರಸರಣಕ್ಕೂ ನಿಕಟ ಸಂಬಂಧ ಉಂಟು. ಪರಮಾಣು ಸಂಖ್ಯೆ ಏರಿದಂತೆ ಧಾತುಗಳು ನಿಸರ್ಗದಲ್ಲಿ ವಿರಳವಾಗುತ್ತವೆ. ಆದ್ದರಿಂದಲೇ ನಿಸರ್ಗದಲ್ಲಿ ಹೈಡ್ರೊಜನ್‍ಯುತ ಸಂಯುಕ್ತಗಳ ಪರಿಮಾಣ ಗರಿಷ್ಠ. ಪ್ರಸರಣದಲ್ಲಿ ಹೀಲಿಯಮ್ಮಿಗೆ ಎರಡನೆಯ ಸ್ಥಾನ ಇತ್ಯಾದಿ. ಇದೇನೂ ಆಕಸ್ಮಿಕವಲ್ಲ. ಏಕೆಂದರೆ ಪ್ರಚಲಿತ ಸಿದ್ಧಾಂತವೊಂದರ ಪ್ರಕಾರ ಆದಿಯಲ್ಲಿ ವೈಲೆಮ್ ಎಂಬ ಮೂಲ ಪದಾರ್ಥ ಇತ್ತಂತೆ. ಅದು ವಿದ್ಯುತ್ಕಾಂತ ವಿಕಿರಣದಿಂದ ಕೂಡಿದ ನ್ಯೂಟ್ರಾನುಗಳ ಸಮುದಾಯವಾಗಿತ್ತೆಂದೂ ಅದರಿಂದ ಕೆಲವೇ ಮಿನಿಟುಗಳಲ್ಲಿ ಇಡಿ ಭೌತಜಗತ್ತು ರೂಪುಗೊಂಡಿತೆಂದೂ ಅಭಿಪ್ರಾಯಪಡಲಾಗಿದೆ. ಪರಿಣಾಮವಾಗಿ ಧಾತುಗಳ ಪ್ರಸರಣಕ್ಕೂ ಅವುಗಳ ಬೈಜಿಕ ರಚನೆಗೂ ಸಂಬಂಧವಿರುವುದು ಅಚ್ಚರಿಯೇನಲ್ಲ. ಧಾತು ಪ್ರಸರಣಕ್ಕೆ ಸಂಬಂಧಿಸಿದ ಇನ್ನೊಂದು ವಿಶೇಷ ಸಂಗತಿಯೆಂದರೆ ಭೂಮಿಯ ಹೊರ ಪದರದಲ್ಲಿರುವ 90% ಧಾತುಗಳಲ್ಲಿ ಸರಿಸಂಖ್ಯೆಯ ಪ್ರೋಟಾನುಗಳೂ ಸರಿಸಂಖ್ಯೆಯ ನ್ಯೂಟ್ರಾನುಗಳೂ ಇವೆ. ಉಳಿದ 10% ಧಾತುಗಳ ಪರಮಾಣು ಬೀಜಗಳಲ್ಲಿ ಬೆಸಸಂಖ್ಯೆ ನ್ಯೂಟ್ರಾನ್ ಅಥವಾ ಬೆಸ ಸಂಖ್ಯೆ ಪ್ರೋಟಾನ್ ಇವೆ. ನೈಟ್ರೊಜನ್ನಿನ ಪರಮಾಣುಸಂಖ್ಯೆ 7, ರಾಶಿಸಂಖ್ಯೆ 14. ಅಂದರೆ ಅದರ ಬೀಜದಲ್ಲಿ 7 ಪ್ರೋಟಾನ್ ಮತ್ತು 7 ನ್ಯೂಟ್ರಾನುಗಳು ಇವೆ ಎಂದರ್ಥ. ಎರಡೂ ಬೆಸಸಂಖ್ಯೆಗಳು. ನೈಟ್ರೊಜನ್ನಿಗಿಂತ ಮುಂದಿರುವ ಯಾವ ಸ್ಥಿರ ಧಾತುಗಳಲ್ಲೂ ಪ್ರೋಟಾನ್ ಮತ್ತು ನ್ಯೂಟ್ರಾನ್ ಸಂಖ್ಯೆಗಳೆರಡೂ ಬೆಸವಾಗಿಲ್ಲ. ಹಾಗಿದ್ದಲ್ಲಿ ಅದು ಸ್ಥಿರವಾಗಿರಲಾರದು.

	ಸರಿ ಪರಮಾಣು ಸಂಖ್ಯೆ ಇರುವ ಧಾತುಗಳಲ್ಲಿ ಐಸೊಟೋಪುಗಳು ಅನೇಕ. ಉದಾಹರಣೆಗೆ ತವರದ ಪರಮಾಣು ಸಂಖ್ಯೆ 50. ಅದರಲ್ಲಿ 10 ಐಸೊಟೋಪುಗಳಿರುವುದನ್ನು ಗಮನಿಸಬಹುದು. ಅದೇ ಬೆಸ ಪರಮಾಣು ಸಂಖ್ಯೆ ಇರುವ ಧಾತುಗಳು ಎರಡಕ್ಕಿಂತ ಹೆಚ್ಚು ಸ್ಥಿರ ಐಸೊಟೋಪುಗಳನ್ನು ಪಡೆದಿರುವುದು ಅಪರೂಪ. ಉದಾಹರಣೆಗೆ ಬೆಳ್ಳಿಯ ಪರಮಾಣು ಸಂಖ್ಯೆ 47. ಅದರಲ್ಲಿ 107 ಮತ್ತು 109 ರಾಶಿ ಸಂಖ್ಯೆಯ ಎರಡು ಸ್ಥಿರ ಐಸೊಟೋಪುಗಳಿವೆ.

	ಸೀಸದ ಪರಮಾಣು ಸಂಖ್ಯೆ 82. ಅದನ್ನು ಮೀರಿದ ಧಾತುಗಳೆಲ್ಲ ಅಸ್ಥಿರ ಮತ್ತು ವಿಕಿರಣಪಟು. ಅಂದರೆ ಕೋಟ್ಯಂತರ ವರ್ಷಗಳ ಅನಂತರ ಸೀಸಕ್ಕಿಂತ ಭಾರವಾದ ಧಾತುಗಳೇ ಇಲ್ಲದಂತಾಗುವುವು. ಈಗ ಅಂಥ ಧಾತುಗಳು ಇರುವುದರಿಂದ ನಮಗೆ ಇಂದು ಪರಿಚಿತವಾಗಿರುವ ಜಗತ್ತು ಆಗ ಇರಲಾರದು. ಸರಿ ಸುಮಾರಾಗಿ ಇನ್ನು ನಾಲ್ಕು ಬಿಲಿಯನ್ ವರ್ಷಗಳಲ್ಲಿ ಹೀಗಾಗುವುದೆಂದು ಒಂದು ಅಂದಾಜು. ಮೇಲೆ ತಿಳಿಸಿದ ವಿಶ್ವಸೃಷ್ಟಿ ಸಿದ್ಧಾಂತಕ್ಕೆ ಈ ತೀರ್ಮಾನ ಅನುಗುಣವಾಗಿದೆ. ನಮ್ಮ ಸೌರವ್ಯೂಹದಿಂದಾಚೆ ಇರುವ ಕೆಲವು ನೀಹಾರಿಕೆಗಳ ರೋಹಿತ ರೇಖೆಗಳ ರಕ್ತಪಲ್ಲಟವನ್ನು (ರೆಡ್ ಷಿಫ್ಟ್) ಗಮನಿಸಿ ಈ ಲೆಕ್ಕಾಚಾರ ಸರಿಯೆಂದು ನಿರ್ಣಯಿಸಿದ್ದಾರೆ. ಯೂರೇನಿಯಮ್ ಆಚೆಗಿರುವ ಧಾತುಗಳಿಗೆ ಟ್ರಾನ್ಸ್‍ಯುರಾನಿಕ್ ಧಾತುಗಳೆಂದು ಹೆಸರು. ಅವು ಪ್ರಕೃತಿಯಲ್ಲಿ ದೊರೆಯುವುವು. ಇತರ ಧಾತುಗಳನ್ನು ನ್ಯೂಟ್ರಾನುಗಳಿಂದ ಸಂಘಟಿಸಿ ಅವನ್ನು ತಯಾರಿಸಬಹುದು. ಕ್ರಮಬದ್ಧ ಅಧ್ಯಯನದ ಸಲುವಾಗಿ ಧಾತುಗಳನ್ನೆಲ್ಲ ಆವರ್ತ ಕೋಷ್ಟಕ (ನೋಡಿ- ಆವರ್ತ-ಕೋಷ್ಟಕ) ಎಂಬ ಪದಕದಲ್ಲಿ ಅಳವಡಿಸಲಾಗಿದೆ. ಮೆಂಡಲೀಫ್ ಎಂಬ ರಷ್ಯದ ರಸಾಯನವಿಜ್ಞಾನಿ ಇದರ ಮೂಲಕರ್ತೃ. ಧಾತುಗಳ ಎಕ್ಸ್‍ಕಿರಣ ರೋಹಿತದ ಆಧಾರದ ಮೇಲೆ ಕೋಷ್ಟಕವನ್ನು ಆಧುನೀಕರಿಸಿದ ಕೀರ್ತಿ ಮೋಸ್ಲೆಯದು.											(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ